
ಪ್ರೀತಿಸಿ ಮದುವೆಯಾದವಳ ಕೈಗೆ ಮಗು ಕೊಟ್ಟು, ಮತ್ತೊಬ್ಬಳಿಗೆ ಬಾಳು ಕೊಟ್ಟ ಭೂಪ..?: ಪೊಲೀಸ್ ಠಾಣೆ ಮೆಟ್ಟಿಲೇರಿದ ಮೊದಲ ಹೆಂಡತಿ
ದೊಡ್ಡಬಳ್ಳಾಪುರ : ಅಣ್ಣ ಮದುವೆಯಾಗಿದ್ದ ಅತ್ತಿಗೆಯ ಮನೆಗೆ ಬಂದು ಹೋಗುತ್ತಿದ್ದ ಆತ, ಬಂದು ಹೋಗುವ ನೆಪದಲ್ಲಿ ಅತ್ತಿಗೆಯ ತಂಗಿಯನ್ನು ಪ್ರೀತಿಸಿ ಮದುವೆಯಾದ, ನಂತರ ಅವಳಿಗೆ ಇಬ್ಬರು ಮಕ್ಕಳನ್ನೂ ಕೊಟ್ಟ. ಈಗ ಮತ್ತೊಬ್ಬಳನ್ನು ಮದುವೆಯಾಗುವ ಮೂಲಕ ಇಬ್ಬರ ಬಾಳಿನಲ್ಲಿ ಬಿರುಗಾಳಿ ಎಬ್ಬಿಸಿದ್ದಾನೆ.
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ನಗರಗೆರೆ ಗ್ರಾಮದ ಶಿಲ್ಪಾ ಅವರು 10 ವರ್ಷಗಳ ಹಿಂದೆ ನೆಲಮಂಗಲದ ರಘು ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದರು. ಅಂದಹಾಗೇ ಈ ರಘು ಶಿಲ್ಪಾಳ ಅಕ್ಕ ಪ್ರೇಮ ಅವರ ಗಂಡನ ತಮ್ಮ, ಮದುವೆಯಾದ ಪ್ರಾರಂಭದಲ್ಲಿ ರಘು ಮತ್ತು ಶಿಲ್ಪಾ ದಾಪಂತ್ಯ ಚೆನ್ನಾಗಿಯೇ ಇತ್ತು. ಇಬ್ಬರು ಗಂಡು ಮಕ್ಕಳಿದ್ದರು. ಎರಡನೇ ಮಗ ಅನಾರೋಗ್ಯದಿಂದ ಸಾವನ್ನಪ್ಪಿದ ನಂತರ ರಘುವಿನ ವರ್ತನೆಯೇ ಬದಲಾಯ್ತು ಎಂದು ಶಿಲ್ಪಾ ತಮ್ಮ ಗೋಳು ತೋಡಿಕೊಳ್ಳುತ್ತಾರೆ.
"ನನ್ನ ಹೆಸರಿನಲ್ಲಿ ಸಾಲ ಮಾಡಿಸಿ ಹಣ ಪಡೆದುಕೊಳ್ಳುತ್ತಿದ್ದ ರಘು, ಏಕೆ ಸಾಲ ಮಾಡಿಸ್ತೀರಿ ಅಂತಾ ಕೇಳಿದ್ರೆ, ನನಗೆ ಹಣ ಬೇಕು, ನಿನ್ನ ತವರು ಮನೆಯಿಂದ ವರದಕ್ಷಿಣೆ ಹಣ ತಂದುಕೊಡುವಂತೆ ಕೇಳುತ್ತಿದ್ದ, ಹಣ ತಂದು ಕೊಡದಿದ್ದರೆ ಮತ್ತೊಂದು ಮದುವೆಯಾಗುವೆ ಎಂದು ಬೆದರಿಕೆ ಹಾಕುತ್ತಿದ್ದ, ನಾನು ಪತಿ ರಘು ನೀಡುತ್ತಿದ್ದ ವರದಕ್ಷಿಣೆ ಕಿರುಕುಳ ಪ್ರಕರಣವನ್ನ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಿದ್ದೇನೆ" ಎಂದು ರಘು ಪತ್ನಿ ಶಿಲ್ಪಾ ವಿವರಿಸಿದರು.
ರಘು ದೊಡ್ಡಬಳ್ಳಾಪುರದ ಹುಡುಗಿಯೊಬ್ಬಳನ್ನು ಎರಡನೇ ಮದುವೆಯಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ರಘುವಿನ ತಂದೆಯೇ ಎರಡನೇ ಮದುವೆಯಾಗಿರುವ ಬಗ್ಗೆ ಸುದ್ದಿ ತಿಳಿಸಿದ್ದಾರೆ ಎಂದು ಶಿಲ್ಪಾ ಆರೋಪ ಮಾಡಿದ್ದಾರೆ,
ರಘು ಎರಡನೇ ಮದುವೆಯಾಗಿರುವ ಹುಡುಗಿಗೂ ಸಹ ಇದು ಎರಡನೇ ಮದುವೆ, ಮೊದಲನೇ ಗಂಡ ಸಾವನ್ನಪ್ಪಿದ್ದಾನೆ, ಆಕೆಯ ಗಂಡನಿಂದ ಹಣ ಬರುವ ಸುಳಿವು ಸಿಕ್ಕ ರಘು ಮತ್ತು ಆತನ ಕುಟುಂಬದವರು ಆಕೆಯ ಜೊತೆ ಎರಡನೇ ಮದುವೆ ಮಾಡಿಸಿದ್ದಾರೆಂದು ಶಿಲ್ಪಾ ಮತ್ತು ಆಕೆಯ ಕುಟುಂಬ ಆರೋಪ ಮಾಡಿದ್ದಾರೆ.
ದೊಡ್ಡಬಳ್ಳಾಪುರದ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಶಿಲ್ಪಾ ನನಗೆ ನನ್ನ ಗಂಡ ಬೇಕು, ನಾನು ಮಗನನ್ನು ಸಾಕುವುದು ಹೇಗೆ? ನನಗೆ ನ್ಯಾಯ ಬೇಕು ಎಂದು ಪೊಲೀಸರ ಬಳಿ ಕೇಳಿಕೊಂಡಿದ್ದಾರೆ, ಇತ್ತಾ ರಘು ಕುಟುಂಬದವರು ನಮಗೆ ಜೀವ ಬೆದರಿಕೆ ಇದ್ದು ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.