ಬ್ರೇಕಿಂಗ್ ನ್ಯೂಸ್
ಉನ್ನತ ಶಿಕ್ಷಣವು ಕೇವಲ ಪದವಿ ಪ್ರಮಾಣ ಪತ್ರ ಗಳಿಸಲು ಹಾಗೂ ಪ್ರತಿಷ್ಠೆಗಾಗಿ ಸೀಮಿತವಾಗಬಾರದು : ಕೋಡಿ ರಂಗಪ್ಪ

ಉನ್ನತ ಶಿಕ್ಷಣವು ಕೇವಲ ಪದವಿ ಪ್ರಮಾಣ ಪತ್ರ ಗಳಿಸಲು ಹಾಗೂ ಪ್ರತಿಷ್ಠೆಗಾಗಿ ಸೀಮಿತವಾಗಬಾರದು : ಕೋಡಿ ರಂಗಪ್ಪ

ಈಜಗತ್ತು ನ್ಯೂಸ್ ಡೆಸ್ಕ್
News desk
October 9, 2025, 8:02 am
ದೊಡ್ಡಬಳ್ಳಾಪುರ : ಉನ್ನತ ಶಿಕ್ಷಣವು ಕೇವಲ ಪದವಿ ಪಡೆಯುವುದಕ್ಕೆ ಹಾಗೂ ಪ್ರತಿಷ್ಠೆಗಾಗಿ ಪ್ರಮಾಣ ಪತ್ರ ಗಳಿಸುವುದಕ್ಕೆ ಸೀಮಿತವಾಗದೆ ವಿದ್ಯಾರ್ಥಿಗಳು ಮತ್ತು ಬೋಧಕರು ಪರಸ್ಪರ ಅನೂನ್ಯತೆಯಿಂದ ವ್ಯಾಸಂಗದಲ್ಲಿ ತೊಡಗಿ ದೈಹಿಕ ಮತ್ತು ಮಾನಸಿಕ ವಿಕಸನ ಹೊಂದಬೇಕೆಂದು ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾದ ಪ್ರೊ. ಕೋಡಿ ರಂಗಪ್ಪ ಹೇಳಿದರು.

 ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಸೆಟ್/ ನೆಟ್ ಕುರಿತಾದ ಎರಡು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

 ವಿದ್ಯಾರ್ಥಿಗಳು ಉದ್ಯೋಗ ಆಧಾರಿತ ಹಾಗೂ ಉದ್ದಿಮೆಗಳಲ್ಲಿ ಅವಕಾಶ ಕಲ್ಪಿಸುವ ಕೋರ್ಸ್ ಗಳನ್ನು ಪಡೆದು ಸ್ವಾವಲಂಭಿಗಳಾಗಬೇಕು. ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಇಂತಹ ಕಾರ್ಯಗಾರಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು. 

 ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಸದಾಶಿವ ರಾಮಚಂದ್ರಗೌಡ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಮುಂದಿನ ರಾಷ್ಟ್ರದ ಭವಿಷ್ಯ ನಿರೂಪಿಸುವ ನಾಗರಿಕರಾಗಿ ಬೆಳೆಯಬೇಕು. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಗೌರವಾನ್ವಿತ ಹುದ್ದೆಗಳನ್ನು ಅಲಂಕರಿಸುವ ಶ್ರೇಷ್ಠ ಗುರಿಯ ಸಾಧನೆಯತ್ತ ಸಾಗಬೇಕೆಂದು ನುಡಿದರು. 

 ಸತೀಶ್ ಜೋಗ್ ಪ್ರಾಸ್ತಾವಿಕ ಭಾಷಣ ಮಾಡಿದರು. ಶ್ರೀನಿವಾಸ್ ಜಿ ಸ್ವಾಗತಿಸಿದರು. ರಮ್ಯಾ ಮತ್ತು ರತ್ನಾ ನಿರೂಪಿಸಿದರು. ಮುನಿರಾಜು ವಂದಿಸಿದರು.

 ಈ ಸಂದರ್ಭದಲ್ಲಿ ಡಾ. ಗಂಗಾಧರಯ್ಯ, ಡಾ. ರಾಜಕುಮಾರ್, ಡಾ. ಸತ್ಯನಾರಾಯಣಗೌಡ ಸೇರಿದಂತೆ ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು.

ಈ ಕ್ಷಣದ ಸುದ್ದಿ