
ದೊಡ್ಡಬಳ್ಳಾಪುರ ಚಾರಿತ್ರಿಕ ಅಧ್ಯಯನ: ವಸತಿ ನೆಲೆಗಳು ಮತ್ತು ಇತಿಹಾಸ ಪೂರ್ವ ಕಾಲದ ರೇಖಾಚಿತ್ರಗಳು
ದೊಡ್ಡಬಳ್ಳಾಪುರ ಚಾರಿತ್ರಿಕ ಅಧ್ಯಯನ
ವಸತಿ ನೆಲೆಗಳು.
ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ವಸತಿ ನೆಲೆಗಳು ನಮ್ಮ ತಾಲ್ಲೂಕಿನಲ್ಲಿ ಈವರೆಗೆ ಎಲ್ಲೂ ದೊರೆತಿರುವ ಬಗ್ಗೆ ವರದಿಯಾಗಿಲ್ಲ. ಹೀಗಾಗಿ ಈ ಕಾಲದ ಜನಜೀವನದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಸಾಮಾನ್ಯವಾಗಿ ಈ ಸಂಸ್ಕೃತಿಗೆ ಸೇರಿದ ವಸತಿನೆಲೆಗಳು ಸಮಾಧಿನೆಲೆಗಳಿಗೆ ಹತ್ತಿರವಾಗಿಯೇ ಇರುತ್ತವೆ. ಅಲ್ಲದೆ ನೀರಿನ ಸೆಲೆಗಳ ಸಮೀಪದಲ್ಲಿ, ಫಲವತ್ತಾದ ಖನಿಜ ಸಂಪತ್ತು (ಕಬ್ಬಿಣ, ಕಣಶಿಲೆ ಇತ್ಯಾದಿ) ಹೇರಳವಾಗಿ ದೊರೆಯುವ ಪ್ರದೇಶಗಳಲ್ಲಿ ಇರುತ್ತವೆ. ಇದನ್ನು ಗಮನದಲ್ಲಿಟ್ಟುಕೊಂಡು ಇತಿಹಾಸ ಪೂರ್ವಕಾಲಕ್ಕೆ ಸಂಬಂಧಿಸಿದಂತೆ ನಮ್ಮ ತಾಲ್ಲೂಕಿನಲ್ಲಿ ಹೆಚ್ಚಿನ ಅಧ್ಯಯನ ಮಾಡಬೇಕಾಗಿದೆ. ಸಮಾಧಿನೆಲೆಗಳು ಕೃಷಿಗೆ ಯೋಗ್ಯವಲ್ಲದ ಸ್ಥಳ ಅಥವಾ ಬಂಜರು ಭೂಮಿಯಲ್ಲಿ ಇಲ್ಲವೆ ಬಂಡೆಗಳು ಸುಲಭವಾಗಿ ಸಿಗುವಂತಹ ಸ್ಥಳಗಳಲ್ಲಿ ಇದ್ದರೆ, ವಸತಿನೆಲೆಗಳ ಆಯ್ಕೆಯಲ್ಲಿ ನೀರು, ಆಹಾರ ಪದಾರ್ಥಗಳು, ರಕ್ಷಣೆ ದೊರೆಯುವಿಕೆ, ಫಲವತ್ತಾದ ಭೂಮಿ ಮುಂತಾದುವು ಮುಖ್ಯ ಪಾತ್ರವಹಿಸಿದ್ದಂತೆ ತೋರುತ್ತದೆ.
ಸಾಧಾರಣವಾಗಿ ವಸತಿನೆಲೆಗಳು ಬೆಟ್ಟದ ತಪ್ಪಲುಪ್ರದೇಶದಲ್ಲಿ ಮತ್ತು ಮೈದಾನಪ್ರದೇಶದಲ್ಲಿ ಇರುತ್ತವೆ. ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಈ ಪ್ರದೇಶಗಳು ಫಲವತ್ತಾಗಿದ್ದು, ಶತಶತಮಾನಗಳಿಂದ ಕೃಷಿಭೂಮಿಯಾಗಿ ಬಳಕೆಯಾಗುತ್ತಿರುವುದರಿಂದ ಹೆಚ್ಚಿನ ನಿವೇಶನಗಳು ಹಾಳಾಗಿರುತ್ತವೆ. ಅಲ್ಲದೆ ಈ ಸಂಸ್ಕೃತಿಗೆ ಸೇರಿದ ಮಡಕೆ- ಕುಡಿಕೆಗಳು ಲಭಿಸಿವೆಯೇ ಹೊರತು ಶಿಲಾಯುಧಗಳಾಗಲಿ, ಇತರೇ ಲೋಹಗಳ ವಸ್ತುಗಳಾಗಲಿ, ಕಿಟ್ಟದ ಅವಶೇಷಗಳಾಗಲಿ ಈವರೆಗೆ ಕಂಡುಬರದಿರುವುದು ಕುತೂಹಲಕಾರಿಯಾಗಿದೆ.
ಆದರೆ ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲುಕುಡಿಬೆಟ್ಟ, ಉಜ್ಜನಿಬೆಟ್ಟ ಮತ್ತು ಘಾಟಿ ಪರಿಸರದ ಕಣಿವೆಗಳಲ್ಲಿ ಬೃಹತ್ ನೈಸರ್ಗಿಕ ಗುಹೆಗಳು, ಕಲ್ಮನೆಗಳು, ದೊಣೆಗಳು, ಕಲ್ಲಾಸರೆಗಳು ಯಥೇಚ್ಛವಾಗಿದ್ದು, ಇಲ್ಲೆಲ್ಲಾ ಪ್ರಾಗೈತಿಹಾಸಿಕ ಕಾಲದ ಮಾನವರು ವಾಸಿಸುತ್ತಿದ್ದರು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇದಕ್ಕೆ ಪೂರಕವಾಗಿ ಈ ಭಾಗಗಳಲ್ಲಿ ದೊರೆತಿರುವ ಒರಟಾದ ಶಿಲಾಯುಧ (ಕಲ್ಲಿನಗುಂಡು), ನಿಲಸುಗಲ್ಲು, ಕಿಂಡಿಕೋಣೆ, ಕಲ್ಗುಪ್ಪೆ, ಕಲ್ಮನೆ ಮುಂತಾದ ಮಾದರಿಯ ಕಲ್ಗೋರಿಗಳು, ಕಲ್ಲಾಸರೆಗಳಲ್ಲಿ ಕಂಡುಬರುವ ರೇಖಾಚಿತ್ರಗಳು ಎಲ್ಲವೂ ಪುಷ್ಟಿ ಒದಗಿಸುತ್ತಾ, ಈ ಪ್ರದೇಶವೂ ಸಹ ಆದಿಮಾನವರ ಕಾಲದಿಂದ ಒಂದು ಪ್ರಬುದ್ಧ ವಾಸ್ತವ್ಯದ ಪ್ರದೇಶವಾಗಿತ್ತೆಂದು ಸ್ಪಷ್ಟವಾಗುತ್ತದೆ.
ಇಂದಿಗೂ ಮುಂದುವರೆದ ಪದ್ಧತಿ
ಎರಡು ಸಾವಿರ ವರ್ಷಗಳ ಹಿಂದೆ ಮರೆಯಾದ ಬೃಹತ್ ಶಿಲಾಯುಗ ಸಂಸ್ಕೃತಿಯ ಕಾಲದಲ್ಲಿ ರಚಿತವಾಗುತ್ತಿದ್ದ ಕಲ್ಲುಗೋರಿಗಳ ಮಾದರಿಯಲ್ಲಿಯೇ ಇತ್ತೀಚಿನ ಶತಮಾನಗಳಲ್ಲಿ ರಚಿಸಲಾದ ಅಪರೂಪದ ಸ್ಮಾರಕ ನೆಲೆಗಳು ಈ ತಾಲ್ಲೂಕಿನಲ್ಲಿ ಪತ್ತೆಯಾಗಿರುವುದು ನಿಜಕ್ಕೂ ಗಮನಾರ್ಹ. ಅಂತಹ ಒಂದು ನೆಲೆ ಕಸಬಾ ಹೋಬಳಿಯ ರಾಜಘಟ್ಟದಲ್ಲಿ ಪತ್ತೆಯಾಗಿದ್ದರೆ, ಇನ್ನೊಂದು ಸಾಸಲು ಹೋಬಳಿಯ ಮಾಕಳಿ ಗ್ರಾಮದಲ್ಲಿ ಪತ್ತೆಯಾಗಿದೆ.
ರಾಜಘಟ್ಟದ ಊರಮಧ್ಯದಲ್ಲಿರುವ 17-18ನೇ ಶತಮಾನದ ಮಂಟಪವೊಂದರ ಮೇಲೆ ಬೃಹತ್ ಶಿಲಾಯುಗ ಸಂಸ್ಕೃತಿಯ ಕಾಲಕ್ಕೆ ಸೇರುವ ಕಿಂಡಿಕೋಣೆ ಅಥವಾ ರಂಧ್ರಕೋಣೆ ಸಮಾಧಿಯ ಮಾದರಿಯಲ್ಲೇ ಅದಕ್ಕಿಂತ ಚಿಕ್ಕದಾದ ಒಂದು ಶಿಲಾಗೋರಿಯನ್ನು ನಿರ್ಮಿಸಲಾಗಿದೆ. ಅಂದರೆ ಇದರಲ್ಲಿ ನಾಲ್ಕು ಗೋಡೆಕಲ್ಲುಗಳು, ಮುಚ್ಚಳಕಲ್ಲು, ಪೂರ್ವಭಾಗದ ಗೋಡೆಕಲ್ಲಿನಲ್ಲಿ ಚಿಕ್ಕದಾಗಿ ರಂಧ್ರವನ್ನು ಕೊರೆದಿರುವುದು ಎಲ್ಲವನ್ನೂ ಸ್ಪಷ್ಟವಾಗಿ ಗುರುತಿಸಬಹುದು. ಈ ಕಲ್ಲಿನ ಗೂಡನ್ನು ಊರಜನ 'ಗೊಡ್ಡುಕಲ್ಲು' ಎಂದು ಕರೆದು, ಪ್ರತಿವರ್ಷವೂ ಇದಕ್ಕೆ ಬೇವಿನಸೊಪ್ಪು, ಅರಿಶಿನ-ಕುಂಕುಮ ಮತ್ತು ಪಂಚಭಕ್ಷ್ಯಗಳ ಎಡೆಯಿಟ್ಟು ಆರಾಧಿಸುವ ಪದ್ಧತಿಯನ್ನು ಇಂದಿಗೂ ಮುಂದುವರೆಸಿಕೊಂಡು ಬಂದಿದ್ದಾರೆ. ಅಲ್ಲದ ಎಡೆಯನ್ನು ಶಾಂತಿಗಾಗಿ ಊರ ಸುತ್ತಲೂ ಇಡುವ ಪದ್ಧತಿ ಇದ್ದು, ಮಂಟಪದ ಗೂಡಿನ ಒಳಗೆ ದೀಪವನ್ನು ಹಚ್ಚುವರು.'
ಅದೇ ರೀತಿಯಾಗಿ ಮಾಕಳಿ ಊರ ಮಧ್ಯದಲ್ಲಿಯೂ ನಿಲುವುಗಲ್ಲಿನ ಮಾದರಿಯಲ್ಲೇ ಇರುವ ಸ್ಮಾರಕವೊಂದನ್ನು ಗುರುತಿಸಲಾಗಿದೆ. ಇದನ್ನೂ ಸಹ ಈ ಊರಜನ 'ಗೊಡ್ಡರಾಯಿ' ಅಥವಾ 'ಗೊಡ್ಡಕಲು ಎಂದು ಕರೆದು, ಪ್ರತಿವರ್ಷ ಅನ್ನವನ್ನು ರಕ್ತದೊಂದಿಗೆ ಬೆರೆಸಿ, ಅರಿಶಿನ-ಕುಂಕುಮದೊಂದಿಗೆ ಎಡೆಯಿಟ್ಟು ಪೂಜಿಸುವರು. ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದರೆ, ಈ ಊರಜನ ಅಲ್ಲಿನ ಪ್ರಾಚೀನ ಸ್ಮಾರಕಗಳನ್ನು ಪೂರ್ವಜರ ನೆಲೆಗಳಾಗಿ ಆರಾಧಿಸುತ್ತಿದ್ದರೆನ್ನಬಹುದು. ಜೊತೆಗೆ ಗತಿಸಿದ ಹಿರಿಯರ ನೆನಪಿಗೆ ಪ್ರತಿವರ್ಷ ಪಿತೃಪಕ್ಷದಲ್ಲಿ ಎಡೆಯಿಟ್ಟು, ದೀಪಹೊತ್ತಿಸಿ ಹಬ್ಬ ಆಚರಿಸುವ ಪದ್ಧತಿಯನ್ನು ಕಾಣಬಹುದು. ಈ ಪರಂಪರೆಯನ್ನು ಗಮನಿಸಿದರೆ ಹಿಂದಿನವರ ಪರಂಪರೆಯನ್ನು ಇಂದಿಗೂ ಮುಂದುವರೆಸುತ್ತಿರುವಂತೆ ಕಾಣುತ್ತದೆ.
ಇತಿಹಾಸ ಪೂರ್ವಕಾಲದ ರೇಖಾಚಿತ್ರಗಳು:
ನಮ್ಮ ತಾಲ್ಲೂಕಿನಲ್ಲಿ ಇತಿಹಾಸ ಪೂರ್ವಕಾಲದ ರೇಖಾಚಿತ್ರಗಳು ಈವರೆಗೆ ಐದು ನೆಲೆಗಳಲ್ಲಿ ಪತ್ತೆಯಾಗಿವೆ. ಇವುಗಳಲ್ಲಿ ಶ್ರೀರಾಮನಹಳ್ಳಿ ನೆಲೆಯನ್ನು ಶೋಧಿಸಿದ ಕೀರ್ತಿ ಸಾಸಲು ಜೆ. ವಿಶ್ವನಾಥ್ ಅವರಿಗೆ ಸಲ್ಲುತ್ತದೆ. ಅಂತೆಯೇ ಘಾಟಿ ಬಳಿಯ ಲಗುಮೇನಹಳ್ಳಿಯ ಗುಡ್ಡದ ಮೇಲಿನ ನೆಲೆಯನ್ನು ಸ್ಮಿತಾರೆಡ್ಡಿಯವರು ಪತ್ತೆಹಚ್ಚಿರುವರು, ಉಳಿದ ಮೂರು ನೆಲೆಗಳೆಂದರೆ ಹುಲುಕುಡಿಬೆಟ್ಟ, ಬೊಮ್ಮನಹಳ್ಳಿ ಮತ್ತು ಮೆಳೇಕೋಟೆ. ಇವುಗಳನ್ನು ನನ್ನ ಕ್ಷೇತ್ರಕಾರ್ಯದಲ್ಲಿ ಪತ್ತೆಹಚ್ಚಲಾಯಿತು. ದೊರೆತಿರುವ ಈ ಎಲ್ಲಾ ಚಿತ್ರಗಳೂ ರೇಖಾಪ್ರಧಾನವಾದವು. ಇವು ನೈಸರ್ಗಿಕ ಗುಹೆ, ಕಲ್ಪೊಟರೆ, ನಿಲುವುಗಲ್ಲಿನ ಮೇಲೆ ಹಾಗೂ ಹೊರಚಾಚಿರುವ ವಿಶಾಲ ಬಂಡೆಗಳ ಕೆಳಭಾಗಗಳಲ್ಲಿ ಕಂಡುಬಂದಿವೆ. ಇವುಗಳಲ್ಲಿ ಪ್ರಾಣಿಗಳು, ಮಾನವರು ಮತ್ತು ಅಂದಿನ ಜನರ/ಕಾಲದ ಸಂವೇದನೆಗಳನ್ನು ನಿರೂಪಿಸುವ ಹಲವಾರು ಚಿತ್ರಗಳಿವೆ. ಇವು ಸರಳ ಶೈಲಿಯಲ್ಲಿವೆ. ನೈಜತೆ ಕಡಿಮೆ, ಬದಲಾಗಿ ಭಾವನಾತ್ಮಕ ಗ್ರಹಿಕೆ ಮತ್ತು ನೇರ ಚಿತ್ರರಚನೆ ಕಂಡುಬರುತ್ತದೆ, ಈ ಚಿತ್ರಗಳು ಒಂದು ರೀತಿಯಲ್ಲಿ ಮಕ್ಕಳು ರಚನೆಮಾಡುವ ಕಡ್ಡಿ, ಗೀರುಚಿತ್ರಗಳಂತೆ ಕಾಣುತ್ತವೆ. ಒಟ್ಟಾರೆ ಇತಿಹಾಸ ಪೂರ್ವಕಾಲದ ಚಿತ್ರಕಲೆ ಮನೋಲ್ಲಾಸಕ್ಕಾಗಿ ರಚಿಸಿದ ಸಮಕಾಲೀನ ಅನುಭವ, ಅನಿಸಿಕೆಗಳ ಆಗರವಾಗಿದೆ ಎನ್ನಬಹುದು.
ಕಿಂಡಿಕೋಣೆ
ಉಜ್ಜನಿಬೆಟ್ಟದ ಸಾಲಿನಲ್ಲಿ ಬರುವ ಸಾಸಲು ಬಳಿಯ ಶ್ರೀರಾಮನಹಳ್ಳಿಯ ಕಾಡಿನ ಮಧ್ಯದಲ್ಲಿರುವ ಗುಡ್ಡದ ಮೇಲಿನ ನಾಲೈದು ಚದರಡಿಯ ದಪ್ಪಗ್ರಾನೈಟ್ ಬಂಡೆಗಳ ಮೇಲೆ ಕಲ್ಲಿನಿಂದ ಕಲ್ಲನ್ನು ಜಜ್ಜಿಕೆತ್ತಿದ 17 ರೇಖಾಚಿತ್ರಗಳು ಕಂಡುಬಂದಿವೆ. ಅವುಗಳಲ್ಲಿ ನವಿಲು, ಜಿಂಕೆ, ಆನೆ, ಗೂಳಿ, ಮಾನವರು ಮತ್ತು ಗುರುತಿಸಲು ಹಾಗೂ ಅರ್ಥೈಸಲು ಕಷ್ಟಸಾಧ್ಯವಾದ, ಅಸ್ಪಷ್ಟವಾದ ಅನೇಕ ರೇಖಾಚಿತ್ರಗಳಿವೆ. ಸ್ಮಿತಾರೆಡ್ಡಿಯವರಿಂದ ಶೋಧಿಸಲ್ಪಟ್ಟಿರುವ ಘಾಟೆ ಬಳಿಯ ಲಗುಮೇನಹಳ್ಳಿಯ ಪೂರ್ವಕ್ಕಿರುವ ಗುಡ್ಡದ ಮೇಲಿನ ಒಂದು ಕಲ್ಲುಬಂಡೆಯ ಮೇಲೆ ಗೂಳಿಯ ರೇಖಾಚಿತ್ರವಿರುವುದನ್ನು ಕಾಣಬಹುದು."
ಮೆಳೇಕೋಟೆಯ ಹೊಲವೊಂದರಲ್ಲಿರುವ ಕಲ್ಗೋರಿ ಮೇಲಿನ ನಿಲುವುಗಲ್ಲಿನ ಮೇಲೆ ಕಲ್ಲಿನಿಂದಲೇ ಕೊರೆದು ರಚಿಸಿರುವ ಮಾನವನ ರೇಖಾಚಿತ್ರವೊಂದಿದೆ, ಅವನು ತುಸು ಬಾಗಿ ಚಲಿಸುತ್ತಿರುವಂತಿದ್ದು, ತಲೆಯ ಮೇಲೆ ಛತ್ರಿಯಂತಹ ಸಾಧನ ಹಿಡಿದಿರುವುದನ್ನು ಗುರುತಿಸಬಹುದು. ಬೊಮ್ಮನಹಳ್ಳಿ ಊರ ಹಿಂದಿರುವ ಗುಡ್ಡಗಳ ನಡುವಿನ ಹೊರಚಾಚಿರುವ ವಿಶಾಲ ಬಂಡೆಯೊಂದರ ಕೆಳಭಾಗದಲ್ಲಿ ಕೈಕೈ ಹಿಡಿದಿರುವ ಮಾನವರು, ಜಿಂಕೆಗಳು, ಹಾವು, ಕೆಲವೊಂದು ಪಕ್ಷಿಗಳು ಮತ್ತು ವೃತ್ತಾಕಾರದ ರಚನೆಗಳಿರುವುದನ್ನು ಪತ್ತೆಹಚ್ಚಲಾಗಿದೆ.
ಕಲ್ಲಾಸರೆ ಹುಲುಕುಡಿ ಬೆಟ್ಟ
ಹುಲುಕುಡಿಬೆಟ್ಟದ ಮೇಲಿನ ಕಲ್ಲಾಸರೆಯಲ್ಲಿ ಕೆಲವೊಂದು ಕೆಂಪುಬಣ್ಣದ ಚಿತ್ರಗಳು ಕಂಡುಬರುವುದಾದರೂ, ಅವು ತೆರೆದ ಸ್ಥಳದಲ್ಲಿರುವುದರಿಂದ ಬಿಸಿಲು, ಮಳೆ, ಗಾಳಿಗಳ ಹೊಡೆತಕ್ಕೆ ಸಿಲುಕಿ ಗುರುತಿಸಲಾಗದಷ್ಟು ಹಾಳಾಗಿವೆ. ಹುಲುಕುಡಿಬೆಟ್ಟದ ಸುತ್ತಮುತ್ತಲಿನ (ತಪ್ಪಲಿನ) ಗುಡ್ಡಗಳಲ್ಲಿ, ಉಜ್ಜನಿ ಅರಣ್ಯ ಪ್ರದೇಶಕ್ಕೆ ಸೇರುವ ಕಣಿವೆಗಳಲ್ಲಿ ಹಾಗೂ ಘಾಟಿ ಪರಿಸರದ ಬೆಟ್ಟಗುಡ್ಡಗಳಲ್ಲಿರುವ ನೈಸರ್ಗಿಕ ಗುಹೆಗಳು, ಕಲ್ಲಾಸರೆಗಳು, ಕಲ್ಮನೆಗಳು ಹಾಗೂ ಕಲ್ಪೊಟರೆಗಳಲ್ಲಿ ವ್ಯಾಪಕ ಕ್ಷೇತ್ರಕಾರ್ಯ ಕೈಗೊಂಡರೆ ಇನ್ನಷ್ಟು ರೇಖಾಚಿತ್ರ ನೆಲೆಗಳು ಪತ್ತೆಯಾಗುವ ಸಾಧ್ಯತೆಗಳಿವೆ.
ಶಿಲಾವೃತ್ತ ಸಮಾಧಿಯಲ್ಲಿ ದೊರೆತ ಕರಿಗೆಂಪು ಪಾತ್ರೆ ಮತ್ತು ಹಿಡಿಯುಳ್ಳ ಘಂಟಾಕಾರದ ಮುಚ್ಚಳ – ಬೂಚನಹಳ್ಳಿ